ಪತ್ರಕರ್ತರ ತುರ್ತು ನಿಧಿ

ಎಸ್‌ಎಸ್ ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

ಎಸ್‌ಎಸ್ ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ

– ನಗರದ ಪತ್ರಕರ್ತರಿಗೆ ಗಿಲ್ಡ್ ನಿಂದ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಣೆ

ರಾಯಚೂರು,ಮೇ22: ಪತ್ರಕರ್ತರ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಲು ಪತ್ರಕರ್ತರ ಸಂಘಗಳು ಸರಕಾರದ ಮೇಲೆ ಒತ್ತಡ ಹಾಕಬೇಕು ಎಂದು ರಾಯಚೂರು ಪ್ರಭಾ ದಿನ ಪತ್ರಿಕೆ ಸಂಪಾದಕರಾದ ಸುಶೀಲೇಂದ್ರ ಸೋದೆಗಾರ ಸಲಹೆ ನೀಡಿದರು.

ರಾಯಚೂರು ರಿಪೋರ್ಟರ್ಸ್ ಗಿಲ್ಡ್ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಎಸ್‌ಎಸ್ ಎಲ್‌ಸಿ, ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪತ್ರಕರ್ತರ ಮಕ್ಕಳಿಗಾಗಿ ಉತ್ತಮ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಮಧ್ಯಮ ವರ್ಗದಿಂದ ಅನೇಕ ಪತ್ರಕರ್ತರು ಬಂದಿದ್ದು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶುಲ್ಕ ಕಟ್ಟುವಷ್ಟು ಆರ್ಥಿಕ ಸಾಮರ್ಥ್ಯ ಸಹ ಇರುವುದಿಲ್ಲ.
ಎಲ್ಲರೂ‌ ಸೇರಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಅಗತ್ಯ ನೆರವು ಸಿಗುವಂತೆ ಸಂಘಟನೆಗಳು ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದರು. ಪತ್ರಕರ್ತರ ಮಕ್ಕಳಿಗೆ ನೆರವು ಕೊಡಿಸಲು ಸಲಹೆ ಮಾಡಿದರು. ನಗದು ಬಹುಮಾನ ತಲಾ 5 ಸಾವಿರ ರೂ ನೀಡುತ್ತಿರುವುದಕ್ಕೆ ಶ್ಲಾಘಿಸಿದರು.

ಗಿಲ್ಡ್ ಮಾಜಿ ಅಧ್ಯಕ್ಷ ,ಹಿರಿಯ ಪತ್ರಕರ್ತ ಕೆ.ಸತ್ಯ ನಾರಾಯಣ ಮಾತನಾಡಿ ಸಮಾಜದಲ್ಲಿ ಅಂಕುಡೊಂಕುಗಳಿಗೆ ಪರಿಹಾರ ಹುಡುಕುವ ಜೊತೆಗೆ ಕುಟುಂಬ ನಿರ್ವಹಣೆ ಮಾಡಲು ಎಲ್ಲರೂ ಶ್ರಮ ಪಡುತ್ತಾರೆ. ಜಿಲ್ಲೆಯಲ್ಲಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಮಾಡುತ್ತಿರುವ ಮೊದಲ ಕಾರ್ಯಕ್ರಮ ಇದಾಗಿದೆ. ಮಕ್ಕಳಿಗೆ ಪಾಲಕರ ಕ್ಷೇತ್ರದಲ್ಲಿ ಸಿಗುವ ಗೌರವ ಖುಷಿ ಇಮ್ಮಡಿಯಾಗಿದೆ. ಮಕ್ಕಳು ಹಾಗೂ ಕುಟುಂಬಕ್ಕೆ ಪತ್ರಕರ್ತ ಹುದ್ದೆಯ ಬಗ್ಗೆ ಮಾಹಿತಿ ನೀಡಬೇಕು ಎಂದರು.

ಸಂಪಾದಕರ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ ಮಾತನಾಡಿ, ಜಿಲ್ಲೆಯಲ್ಲಿ ಪತ್ರಕರ್ತರ ಮಕ್ಕಳಿಗೆ ಸನ್ಮಾನಿಸಿ ಗೌರವಿಸುತ್ತಿರುವುದು ಉತ್ತಮ ಕಾರ್ಯವಾಗಿದೆ. ಕಳೆದ ಎರಡು ವರ್ಷದಿಂದ ಗಿಲ್ಡ್ ನಾನಾ ಕಾರ್ಯಕ್ರಮಗಳನ್ನ ಮಾಡುತ್ತಿದೆ. ಕಟ್ಟಡ ನವೀಕರಣ ,ಪತ್ರಕರ್ತರಿಗೆ ವಿಮೆ, ಮೃತ ಕುಟುಂಬಕ್ಕೂ‌ ನೆರವು ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಸಂಪಾದಕರ ಸಂಘದಿಂದಲೂ ಪತ್ರಕರ್ತರ ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ಗಿಲ್ಡ್ ಅಧ್ಯಕ್ಷ ವಿಜಯ ಜಾಗಟಗಲ್ ಮಾತನಾಡಿ ಪತ್ರಕರ್ತರ ಕ್ಷೇಮಾಭಿವೃದ್ಧಿ ಜೊತೆಗೆ ಇತರ ಉತ್ತಮ ಕಾರ್ಯಕ್ರಮಗಳನ್ನೂ ಗಿಲ್ಡ್ ಆಯೋಜಿಸುತ್ತ ಬಂದಿದೆ. ಅದರ ಭಾಗವಾಗಿ ಪತ್ರಕರ್ತರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಂಡಿದೆ. ಚೆಸ್ ಕಾರ್ಯಗಾರ, ಸಮ್ಮರ್ ಕ್ಯಾಂಪ್‌ಗಳನ್ನ ಈ ಹಿಂದೆ ಆಯೋಜಿಸಲಾಗಿತ್ತು.
ಮಕ್ಕಳನ್ನ ಬೌದ್ಧಿಕವಾಗಿ ಬೆಳೆಸಲು ಮುಂದಿನ ದಿನಗಳಲ್ಲಿ ಇನ್ನೂ ಅಗತ್ಯ ಕಾರ್ಯಕ್ರಮಗಳನ್ನ ಆಯೋಜಿಸಲಾಗುತ್ತದೆ ಎಂದರು. ಉತ್ತಮ ವಿಚಾರ, ಯೋಜನೆಗಳನ್ನ ನಮ್ಮ‌ ಮುಂದೆ ತಂದರೆ ಜಾರಿ ಮಾಡಲು ಪ್ರಯತ್ನಿಸುತ್ತೇವೆ. ಗಿಲ್ಡ್ ‌ನ ಬೆಳ್ಳಿ ಮಹೋತ್ಸವ ಕಾರ್ಯಕ್ರಮ ಆಗಸ್ಟ್‌ ತಿಂಗಳಲ್ಲಿ ಆಯೋಜಿಸಲಾಗುತ್ತಿದ್ದು ಕಾರ್ಯಕ್ರಮ ಯಶಸ್ಸಿಗೆ ಎಲ್ಲ ಪತ್ರಕರ್ತರು ಸಹಕಾರ ನೀಡುವಂತೆ ಕೋರಿದರು.

ಇದೆ ವೇಳೆ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕಗಳನ್ನ ಪಡೆದ ಪತ್ರಕರ್ತ ಶಿವಪ್ಪ ಮಡಿವಾಳರ್ ಪುತ್ರಿ ಕಾಳಿಕಾದೇವಿ
ಹಾಗೂ ಪತ್ರಿಕಾ ಛಾಯಾಗ್ರಾಹಕ ಸುರೇಶ್ ಸ್ವಾಮಿ ಪುತ್ರಿ ಸ್ವಪ್ನಾ ಅವರಿಗೆ ತಲಾ 5 ಸಾವಿರ ಪ್ರೋತ್ಸಾಹ ಚೆಕ್ , ಸ್ಮರಣಿಕೆ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಯಿತು.

ಇನ್ನೂ ಇದೇ ಸಂದರ್ಭದಲ್ಲಿ ನಗರದ ಪತ್ರಕರ್ತರಿಗೆ ಯಶಸ್ವಿನಿ ಆರೋಗ್ಯ ಕಾರ್ಡ್ ವಿತರಿಸಲಾಯಿತು. ವೇದಿಕೆಯಲ್ಲಿ ಪ್ರಜಾ ಪ್ರಸಿದ್ದ ಪತ್ರಿಕೆ ಸಂಪಾದಕ ಶಿವರಾಜ್, ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ ಹಾಜರಿದ್ದರು. ವೆಂಕಟೇಶ್ ಹೂಗಾರ್ ಪ್ರಾಸ್ತವಿಕವಾಗಿ ಮಾತನಾಡಿದರು. ಪತ್ರಕರ್ತ ರಾಚಯ್ಯಸ್ವಾಮಿ ಸ್ವಾಗತಿಸಿದರು, ಪತ್ರಕರ್ತ ಮಲ್ಲನಗೌಡ ಪಾಟೀಲ್ ನಿರೂಪಿಸಿದರು, ಗಿಲ್ಡ್ ಜಂಟಿ‌ ಕಾರ್ಯದರ್ಶಿ ಶ್ರೀಕಾಂತ್ ಸಾವೂರು ವಂದಿಸಿದರು. ಕಾರ್ಯಕ್ರಮದಲ್ಲಿ ಹಿರಿಯ ಕಿರಿಯ ಪತ್ರಕರ್ತರು ಭಾಗವಹಿಸಿದ್ದರು.

ಹಂಚಿಕೊಳ್ಳಿ:

Leave A Comment