– ವಿದ್ಯಾರ್ಥಿಗಳಲ್ಲಿನ ಮಾಧ್ಯಮಗಳ ಬಗೆಗಿನ ಕುತೂಹಲ ತಿಳಿಯಲು ಉತ್ತಮ ವೇದಿಕೆ – ಆರ್.ಗುರುನಾಥ್

ರಾಯಚೂರು, ಸೆ11: ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿಮಹೋತ್ಸವ ಅಂಗವಾಗಿ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವೇದಿಕೆ ಕಾರ್ಯಕ್ರಮವನ್ನ ಹಿರಿಯ ಪತ್ರಕರ್ತರಾದ ದತ್ತು ಸರ್ಕಿಲ್ ಅವರು ಉದ್ಘಾಟಿಸಿ, ಈ ಮೂಲಕ ಬೆಳ್ಳಿಮಹೋತ್ಸವದ ಸರಣಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.
“ಮಾಧ್ಯಮಗಳು ಮತ್ತು ಪ್ರಜಾಪ್ರಭುತ್ವ : ಇಂದಿನ ಸವಾಲುಗಳು ಹಾಗೂ ನೈತಿಕತೆ ” ವಿಷಯ ಕುರಿತು ಪ್ರಬಂಧ ಸ್ಪರ್ಧೆಯನ್ನ ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿತ್ತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಗಳಾಗಿ ಪಾಲ್ಗೊಂಡು ಮಾತನಾಡಿದ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಆರ್.ಗುರುನಾಥ್ ಪ್ರಬಂಧ ಸ್ಪರ್ಧೆಗಳು ವಿದ್ಯಾರ್ಥಿಗಳ ಭಾಷೆಯ ಕೌಶಲ್ಯ ಬರವಣಿಗೆ ವೃದ್ಧಿಗೆ ಅನುಕೂಲಕರವಾಗಲಿವೆ. ಪ್ರಥಮ, ದ್ವಿತೀಯ ಸ್ಥಾನಗಳು ಮುಖ್ಯ ಅಲ್ಲ ಸ್ಫರ್ಧೆಗಳಲ್ಲಿ ಭಾಗವಹಿಸುವ ಮೂಲಕ ಅಭಿವ್ಯಕ್ತಿ ಹೊರಹಾಕುವುದು ವಿದ್ಯಾರ್ಥಿಗಳ ಉತ್ತಮ ಭವಿಷ್ಯಕ್ಕೆ ಪೂರಕವಾಗಲಿವೆ ಎಂದರು. ವಿಷಯ ಪರಿಚಯಿಸುವ ಜೊತೆಗೆ ಅದರ ಆಳ ಅರಿತು ಬರೆಯಬೇಕು. ಪ್ರಬಂಧ ಸ್ಪರ್ಧೆ ಮೂಲಕ ಮಾಧ್ಯಮಗಳ ಬಗ್ಗೆ ವಿದ್ಯಾರ್ಥಿಗಳ ಕುತೂಹಲ ತಿಳಿಯುವ ಉತ್ತಮ ಕಾರ್ಯಕ್ಕೆ ಗಿಲ್ಡ್ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ವಿಜಯ ಕರ್ನಾಟಕ ಹಿರಿಯ ವರದಿಗಾರ ಹಾಗೂ ಆರ್ಆರ್ಜಿ ಸದಸ್ಯ ಮಂಜುನಾಥ ಸಾಲಿ ಮಾತನಾಡಿ, ಮಾಧ್ಯಮಗಳನ್ನು ವಿದ್ಯಾರ್ಥಿ ಯುವ ಸಮುದಾಯ ನೋಡುವ ರೀತಿ ಆಪೇಕ್ಷೆ ಭಾವನೆಗಳು ಈ ಪ್ರಬಂಧ ಸ್ಪರ್ಧೆಯಲ್ಲಿ ಲಭ್ಯವಾಗಲಿದೆ. ಈಗಿನ ಯುವಕರಿಗೆ ತಮ್ಮ ಭಾವನೆ ಹಂಚಿಕೊಳ್ಳಲು ಅವಕಾಶಗಳಿದ್ದರೂ ಅಭಿಪ್ರಾಯ ತಿಳಿಸಲು ಹಿಂದೇಟು ಹಾಕುತ್ತಿದ್ದಾರೆ. ಅಂತಹ ಮನೋಭಾವದಿಂದ ಹೊರ ಬರಲು ಇದು ವೇದಿಕೆಯಾಗಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ರಿಪೋರ್ಟರ್ಸ್ ಗಿಲ್ಡ್ ಅಧ್ಯಕ್ಷರಾದ ವಿಜಯ್ ಜಾಗಟಗಲ್ 25 ವರ್ಷಗಳನ್ನ ಪೂರೈಸಿರುವ ರಾಯಚೂರು ರಿಪೋರ್ಟರ್ಸ್ ಗಿಲ್ಡ್ ಬೆಳ್ಳಿ ಮಹೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ ಜೆನ್ ಜಿ ಗಳಿಗೆ ಮಾಧ್ಯಮಗಳ ಬಗ್ಗೆ ಇರುವ ಭಾವನೆ ಅರಿತುಕೊಳ್ಳಲು ಈ ಪ್ರಬಂಧ ಸ್ಪರ್ಧೆ ಸಹಕಾರಿಯಾಗಬಹುದು ಎಂದು ಹೇಳಿದರು. ಈ ಸ್ಪರ್ಧೆ ಯಲ್ಲಿ ಪಾಲ್ಗೊಂಡು ಮೊದಲ ಮೂರು ಸ್ಥಾನ ಪಡೆದವರ ಪ್ರಬಂಧಗಳನ್ನು ಗಿಲ್ಡ್ ಹೊರತರುವ ಸ್ಮರಣ ಸಂಚಿಕೆಯಲ್ಲಿ ಮುದ್ರಿಸಲಾಗುವುದು ಎಂದು ಈ ವೇಳೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಗಿಲ್ಡ್ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ, ಪ್ರಬಂಧ ಸ್ಪರ್ಧೆ ಸಂಯೋಜಕ ಮಲ್ಲನಗೌಡ ಪಾಟೀಲ್ ಸೇರಿದಂತೆ ನಗರದ ಹಲವಾರು ಪತ್ರಕರ್ತರು, ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
