ಪತ್ರಕರ್ತರ ತುರ್ತು ನಿಧಿ

ರಾಯಚೂರು ರಿಪೋರ್ಟರ‍್ಸ್ ಗಿಲ್ಡ್‌ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಎ.ವಸಂತಕುಮಾರ ಚಾಲನೆ

ರಾಯಚೂರು ರಿಪೋರ್ಟರ‍್ಸ್ ಗಿಲ್ಡ್‌ ಪತ್ರಿಕಾ ಭವನ ನವೀಕರಣ ಕಾಮಗಾರಿಗೆ ಎ.ವಸಂತಕುಮಾರ ಚಾಲನೆ

ರಾಯಚೂರು ಜ20 : ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ನವೀಕರಣ ಅತ್ಯಂತ ಅವಶ್ಯವಿದ್ದು, ಇದಕ್ಕಾಗಿ ಮೊದಲ ಹಂತದಲ್ಲಿ ನನ್ನ ಅನುದಾನದಲ್ಲಿ 10 ಲಕ್ಷ ರೂ.ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನದ ಅವಶ್ಯವಿದ್ದರೆ ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿಧಾನ ಪರಿಷತ್ ಶಾಸಕ ಎ.ವಸಂತ ಕುಮಾರ ಹೇಳಿದರು.

ಅವರು ಇಂದು ನಗರದ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪತ್ರಿಕಾ ಭವನದ ಒಳಾಂಗಣ ನವೀಕರಣ ಕಾಮಗಾರಿಗೆ ಭೂಮಿ ಪೂಜೆ ನರೆವೇರಿಸಿ ಮಾತನಾಡಿದರು.
ಕಳೆದ 25 ವರ್ಷಗಳ ಹಿಂದೆ ಈ ಪತ್ರಿಕಾ ಭವನವನ್ನು ನಿರ್ಮಾಣ ಮಾಡಲಾಗಿದ್ದು, ಇಂದಿನ ಬದಲಾವಣೆಗೆ ಅನುಗುಣವಾಗಿ ಆಧುನೀಕರಣದ ಅಗತ್ಯವಿದೆ. ನವೀಕರಣಕ್ಕೆ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಅಧ್ಯಕ್ಷರಾದ ವಿಜಯಕುಮಾರ ಜಾಗಟಗಲ್ ರಿಂದ ಪ್ರಸ್ತಾವನೆ ಬಂದಾಗ 10 ಲಕ್ಷ ರೂ.ಅನುದಾನ ನೀಡುವ ಭರವವಸೆಯನ್ನು ನೀಡಲಾಗಿತ್ತು. ಆ ಪ್ರಕಾರ ಅನುಮೋದನೆಗೊಂಡು ಅನುದಾನ ಬಿಡುಗಡೆಯಾಗಿದೆ.
ಪತ್ರಿಕಾ ಭವನದ ಒಳಾಂಗಣ ನವೀಕರಣದ ಕಾಮಗಾರಿ ಸುಸಜ್ಜಿತವಾಗಿರಬೇಕು. 10 ಲಕ್ಷ ರೂ. ಅನುದಾನ ಸಾಲದಿದ್ದರೆ ಮುಂದಿನ ದಿನಗಳಲ್ಲಿ ಮತ್ತಷ್ಟು ಅನುದಾನ ನೀಡುವುದಾಗಿ ಎ.ವಸಂತ ಕುಮಾರ ಭರವಸೆ ನೀಡಿದರು.

25 ವರ್ಷದ ಹಿಂದೆ ಪತ್ರಿಕಾ ಭವನ ಕಟ್ಟಡದ ಭೂಮಿಗಾಗಿ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆಗ ನಾನು ನಗರಸಭೆ ಸದಸ್ಯನಾಗಿದ್ದೆ. ಎಂ.ಈರಣ್ಣನವರು ಅಧ್ಯಕ್ಷರಾಗಿದ್ದರು. ಸಭೆಯಲ್ಲಿ ಭೂಮಿ ಮಂಜೂರು ಮಾಡಲು ಒಪ್ಪಿಗೆ ಸೂಚಿಸಲಾಯಿತು. ನಂತರ ಅಂದಿನ ಮುಖ್ಯಮಂತ್ರಿ ಧರ್ಮಸಿಂಗ್ , ಸಂಸದರಾಗಿದ್ದ ಎ.ವೆಂಕಟೇಶ ನಾಯಕ ಹಾಗೂ ಎನ್.ಎಸ್.ಬೋಸರಾಜು ಅವರ ಸಹಕಾರದಿಂದ ಕಟ್ಟಡವು ನಿರ್ಮಾಣವಾಗಿರುವುದನ್ನು ನಾವು ಸ್ಮರಿಸಲೇಬೇಕು. ಇದೀಗ ಈ ಕಟ್ಟಡ ಒಳಾಂಗಣ ನವೀಕರಣಕ್ಕಾಗಿ ನನ್ನ ಎಂಎಲ್‌ಸಿ ಅನುದಾನವನ್ನು ಬಳಸುವ ಭಾಗ್ಯವನ್ನು ನನಗೆ ನೀಡಿರುವುದು ಸಂತಸ ತಂದಿದೆ. ಕಳೆದ ಒಂದು ವರ್ಷದಲ್ಲಿ ಹತ್ತಾರು ಯೋಜನೆಗಳ ಮೂಲಕ ಜಿಲ್ಲೆಯ ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್ ಶಾಸಕರಾದ ಎ.ವಸಂತ ಕುಮಾರ ಅವರನ್ನು ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ಪದಾಧಿಕಾರಿಗಳು ಹಾಗೂ ಪತ್ರಕರ್ತರು ಸನ್ಮಾನಿಸಿ ಗೌರವಿಸಿದರು. ಇದೇ ವೇಳೆ ಹಿರಿಯ ವೀಡಿಯೋ ಜರ್ನಲಿಸ್ಟ್ ಅಬ್ದುಲ್ ಖಾದರ್ ಅವರಿಗೆ ರಾಯಚೂರು ರಿಪೋರ್ಟರ‍್ಸ್ ಗಿಲ್ಡ್ ‌ನಿಂದ ಕೊಡಮಾಡುವ ವಾರ್ಷಿಕ ದತ್ತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ರಾಷ್ಟ್ರೀಯ ಪತ್ರಿಕಾ ದಿನಾಚರಣೆ ವೇಳೆ ಅನಿವಾರ್ಯ ಕಾರಣಕ್ಕೆ ಗೈರಾಗಿದ್ದ ಅಬ್ದುಲ್ ಖಾದರ್ ಅವರಿಗೆ ಈ ವೇಳೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಇನ್ನೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗಣ್ಯರು ಪತ್ರಕರ್ತರ ತುರ್ತು ನಿಧಿಯ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ದೇಣಿಗೆ ನೀಡಿದರು.

ಕಾರ್ಯಕ್ರಮದಲ್ಲಿ ರಾಯಚೂರು ರಿಪೋಟರ‍್ಸ್ ಗಿಲ್ಡ್ ಅಧ್ಯಕ್ಷರಾದ ವಿಜಯ ಜಾಗಟಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಕರೀಮ, ಡಿ.ಕೆ.ಮುರಳಿ ಯಾದವ, ಎಂ.ಕೆ.ಬಾಬರ್, ಡಾ.ರಝಾಕ ಉಸ್ತಾದ್, ಬದಸವರಾಜ ದರೂರು, ಕೆ.ಅಸ್ಲಂ ಪಾಶಾ, ಜೆ.ಸತ್ಯನಾಥ, ಕೆ.ಇ.ಕುಮಾರ, ಮೊಹಮ್ಮದ ಉಸ್ಮಾನ, ಹಿರಿಯ ಪತ್ರಕರ್ತರಾದ ಚನ್ನಬಸವಣ್ಣ, ಕೆ.ಸತ್ಯನಾರಾಯಣ, ಚನ್ನಬಸವ ಬಾಗಲವಾಡ, ಖಾನ್‌ಸಾಬ್ ಮೋಮಿನ್, ಜಯರಾಂ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಂಚಿಕೊಳ್ಳಿ:

Leave A Comment