ಬಂಡವಾಳ ಶಾಹಿಗಳಿಂರ ಮಾಧ್ಯಮ ಖರೀದಿ, ನಿರ್ಭೀತಿ ವರದಿ ಕಷ್ಟ- ಎನ್ ಎಸ್ ಬೋಸರಾಜು
ರಾಯಚೂರು, ಡಿ.28-
ದೇಶ ಮತ್ತು ವಿದೇಶದ ಯಾವುದೇ ಕಾರ್ಪೊರೇಟ್ ವಲಯ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಕ್ಷೇತ್ರ ಖರೀದಿಸಿದ್ದು ಹಿಂದಿನಂತೆ ಪತ್ರಕರ್ತರು ಮುಕ್ತವಾಗಿ ಬರೆದು ಪಾವಿತ್ರತೆ ಉಳಿಸುವ ಅಗತ್ಯವಿದೆ ಎಂದು ರಾಜ್ಯ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಬೋಸರಾಜು ಹೇಳಿದರು.
ಅವರಿಂದು ನಗರದ ರಾಯಚೂರು ರಿಪೋರ್ಟರ್ ಪತ್ರಕರ್ತರ ಗಿಲ್ಡ್ ಸಭಾಂಗಣದಲ್ಲಿ ರಾಯಚೂರು ರಿಪೋರ್ಟರ್ ಪತ್ರಕರ್ತರ ಗಿಲ್ಡ್,ಜಿಲ್ಲಾ ಮತ್ತು ಪ್ರಾದೇಶಿಕ ದಿನಪತ್ರಿಕೆಗಳ ಸಂಪಾದಕರ ಸಂಘ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದ ಕೆಲವೇ ಉದ್ಯಮಿಗಳ ಕೈಯಲ್ಲಿ ಮಾಧ್ಯಮ ಕ್ಷೇತ್ರ ಸಿಲುಕಿ ಇಂದು ಪತ್ರಕರ್ತರ ವೃತ್ತಿ ಹಗ್ಗದ ಮೇಲಿನ ನಡಿಗೆಯಾಗಿದೆ. ಅದಾನಿ ಅಂಬಾನಿಯಂತವರ ಕಯಗೊಂಬೆಯಾಗುವ ಆತಂಕ ಹೆಚ್ಚಿದೆ. ಇದರಿಂದ ಇಂದು ಮಾಧ್ಯಮ ಕ್ಷೇತ್ರ ಕವಲುದಾರಿ ಹಿಡಿಯುವಂತಾಗಿದೆ. ಲಾಭಕ್ಕಾಗಿ ಪತ್ರಿಕೋದ್ಯಮ ನಿರ್ವಹಿಸು ವುದು ಅತ್ಯಂತ ಅಪಾಯಕಾರಿ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ. ಕೆಲವೇ ವ್ಯಕ್ತಿಗಳು ಇದನ್ನು ನಿಯಂತ್ರಿಸಿದರೆ, ಮುಕ್ತ ಚರ್ಚೆ ಮತ್ತು ಮಾಹಿತಿಯಿಂದ ಜನ ವಂಚಿತಗೊಳ್ಳುತ್ತಾರೆ ಎಂದರು.
ಪತ್ರಕರ್ತರು ಅನೇಕ ಕಷ್ಟಗಳನ್ನು ಎದುರಿಸುತ್ತಾರೆ. ಎಂತಹ ಕಠಿಣ ಪರಿಸ್ಥಿತಿ ಬಂದರೂ ಪ್ರಾಮಾಣಿಕತೆಯಿಂದ ವರದಿ ಮಾಡಬೇಕು. ಯಾವುದೇ ಆಮಿಷ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾಗದೆ ನಿಷ್ಠುರ ಮತ್ತು ನಿಖರವಾಗಿ ಕಾರ್ಯನಿರ್ವಹಿಸಬೇಕು. ಸ್ವಾತಂತ್ರ ಪೂರ್ವ ಮತ್ತು ಸ್ವಾತಂತ್ರ ನಂತರ ಪತ್ರಿಕೊದ್ಯಮ ಅತ್ಯಂತ ಮಹತ್ವದು, ಕಲ್ಯಾಣ ಕರ್ನಾಟಕ ಭಾಗದ ಸಮಗ್ರತೆಗೆ ಪತ್ರಕರ್ತರು ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಜಿಲ್ಲೆಯ ಪತ್ರಕರ್ತರು ರಾಜಕೀಯ ಬಗ್ಗೆ ನಮಗೆ ಮಾರ್ಗದರ್ಶನ ನೀಡಿ ದ್ದಾರೆ. ಪತ್ರಿಕೋದ್ಯಮ ಪವಿತ್ರ ಮತ್ತು ಗೌರವದ ವೃತ್ತಿಯಾಗಿದೆ. ಪತ್ರಿಕೆಗಳಲ್ಲಿನ ವರದಿಗಳು ಸಮಾಜದ ಕನ್ನಡಿಯಂತಿರಬೇಕು. ಸಕಾರಾತ್ಮಕ ಬದಲಾವಣೆ ತರುವ ಶಕ್ತಿ ಪತ್ರಿಕೋದ್ಯಮಕ್ಕಿದೆ ಎಂದರು. ಹೊಸ ತಲೆಮಾರಿನ ಪತ್ರಕರ್ತರಿಗೆ ವೃತ್ತಿ ಘನತೆ, ಗೌರವದ ಬಗ್ಗೆ ತರಬೇತಿ ಅಗತ್ಯವಿದೆ. ಕೆಲವರ ವೈಯಕ್ತಿಕ ತೇಜೋವಧೆ ಮಾಡುವುದೆ ವೃತ್ತಿಯಾಗಬಾರದು. ಪ್ರಜಾಪ್ರಭುತ್ವ ಮಹತ್ವವನ್ನು ಕಳೆದುಕೊಂಡು, ಮಾಧ್ಯಮಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವ ಅಪಾಯ ಅಧಿಕವಾಗಿದೆ. ದೇಶದ ಪ್ರಜಾಪ್ರಭುತ್ವ ಆರೋಗ್ಯವಾಗಿ ಉಳಿಯಲು ಮತ್ತು ಜನ ಜಾಗೃತಿಗೆ ಪತ್ರಿಕೋದ್ಯಮ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಪತ್ರಕರ್ತರು ಪ್ರಜಾಪ್ರಭುತ್ವ ವ್ಯವಸ್ಥೆಯ ಕಾವಲುದಾರರಾಗಿ ಕಾರ್ಯ ನಿರ್ವಹಿಸಬೇಕಾಗಿದೆ. ಸರ್ಕಾರದ ಒಳ್ಳೆ ಕೆಲಸಗಳಿಗೆ ಬೆನ್ನು ತಟ್ಟುವ ಮತ್ತು ತಪ್ಪು ದಾರಿಯ ಸಂದರ್ಭದಲ್ಲಿ ಎಚ್ಚರಿಸುವ ಜವಾಬ್ದಾರಿಯನ್ನು ನಿರ್ಮಿಸಬೇಕಾಗಿದೆ. ಪತ್ರಿಕೋದ್ಯಮ ಕಾಲಕ್ರಮಣ ಬದಲಾಗುತ್ತಿದೆ. ಹಿಂದೆ ಮುದ್ರಣ ಮಾಧ್ಯಮಕ್ಕೆ ಇರುವ ಮಾನ್ಯತೆ ಈಗ ಕಡಿಮೆಯಾಗಿದೆ. ಕಾರಣ, ವಿದ್ಯುನ್ಮಾನ ಮಾಧ್ಯಮಗಳು ಪ್ರಭಾವ ಹೆಚ್ಚಾಗಿದೆ.ಆದರೆ, ಪತ್ರಕರ್ತರು ಕೇವಲ ಉಧ್ಯಮಗಳು ಹಾಗೂ ರಾಜಕಾರಣಗಳ ಕೈಗೊಂಬೆಯಾಗಿ ಕೆಲಸ ಮಾಡದೇ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳ ಬೆಳಕು ಚೆಲ್ಲಿದಾಗ ಮಾತ್ರ ಪತ್ರಿಕೋದ್ಯಮಕ್ಕೆ ಜನರಲ್ಲಿ ವಿಶ್ವಾಸ ಬರುತ್ತದೆ. ಜನಸಾಮಾನ್ಯರಿಗೆ ಪತ್ರಕರ್ತರು ಮಾದರಿಯಾಗಬೇಕು.
ಈ ಭಾಗದ ಸಮಗ್ರ ಅಭಿವೃದ್ಧಿಗೆ ಪತ್ರಿಕೋದ್ಯಮ ಸರ್ಕಾರ ಮತ್ತು ಜನರ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕೆಂದರು.
.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಪತ್ರಕರ್ತರಿಗೆ ಮಾಶಾಸನ ಹೆಚ್ಚಳ ಮಾಡಲಾಗಿದೆ. ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದರು.ರಾಜ್ಯ ಸರ್ಕಾರದಿಂದ ಪತ್ರಕರ್ತರಿಗೆ ದೊರೆಯಬೇಕಾದ ಎಲ್ಲಾ ಸವಲತ್ತು ಒದಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ಕಲ್ಬುರ್ಗಿ ಪೀಠದ ಮಾಹಿತಿ ಆಯುಕ್ತರಾದ ಬಿ. ವೆಂಕಟಸಿಂಗ್ ಅವರು ವಿಶೇಷ ಸನ್ಮಾನ ಸ್ವೀಕರಿಸಿ ಮಾತನಾಡಿ, ರಾಯಚೂರು ರಿಪೋರ್ಟರ್ ಗಿಲ್ಡ್ ಭವನ ನಿರ್ಮಾಣದಲ್ಲಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳ ಕೊಡುಗೆ ಅಪಾರವಿದೆ ಎಂದರು. ಪತ್ರಕರ್ತರ ತುರ್ತು ಪರಿಸ್ಥಿತಿಯಲ್ಲಿ ಗಿಲ್ಡ್ ವತಿಯಿಂದ ಸಹಾಯಧನ ನೀಡುವ ಉದ್ದೇಶದಿಂದ ಪತ್ರಕರ್ತರ ತುರ್ತು ನಿಧಿಯನ್ನು ಜಾರಿಗೆ ತರಲಾಗಿದೆ. 25ನೇ ಬೆಳ್ಳಿ ಸಂಭ್ರಮ ಆಚರಣೆಯಲ್ಲಿ ಇರುವ ರಾಯಚೂರು ರಿಪೋರ್ಟರ್ ಗಿಲ್ಡ್ ಈಗ ಹೆಮ್ಮರವಾಗಿ ಬೆಳೆದು ಬಂದಿದೆ ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಗ್ರಾಮೀಣ ಶಾಸಕರಾದ ಬಸನಗೌಡ ದದ್ದಲ್ ಅವರು ಪತ್ರಕರ್ತರ ತುರ್ತುನಿಧಿಗೆ ಚಾಲನೆ ನೀಡಿ ಮಾತನಾಡಿ, ಶಾಸಕಾಂಗ ಕಾರ್ಯಾಂಗ ನ್ಯಾಯಾಂಗದ ನಂತರ ನಾಲ್ಕನೇ ಅಂಗವಾದ ಪತ್ರಿಕೋದ್ಯಮದ ಮುದ್ದಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಜನರಿಗೆ ಸತ್ಯ ಸತ್ಯತೆಯನ್ನು ಬಿತರಿಸಬೇಕು ಹೊರತು ಸುಳ್ಳು ಪ್ರಕಟಿಸಬಾರದು. ಪ್ರಸ್ತುತ ಕಾಲಘಟ್ಟದಲ್ಲಿ ಪತ್ರಿಕೋದ್ಯಮ ತನ್ನ ಪಾವಿತ್ರತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ. ಪತ್ರಕರ್ತರು ಜವಾಬ್ದಾರಿಯುತವಾಗಿ ಕೆಲಸ ಮಾಡಬೇಕು. ಜರ್ನಲಿಸಂ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೇ ನೂತನವಾಗಿ ವೃತ್ತಿಪರ ಪತ್ರಕರ್ತರಿಗೆ ತರಬೇತಿ ನೀಡುವ ಅಗತ್ಯವಿದೆ. ದೇಶ ಮತ್ತು ರಾಜ್ಯದಲ್ಲಿ ಮುದ್ರಣ ಮತ್ತು ವಿದ್ಯುಮಾನ ಮಾಧ್ಯಮಗಳು ಅತ್ಯಂತ ಬಲಿಷ್ಠವಾಗಿದೆ. ಈ ನಾಲ್ಕು ಅಂಗ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿದರೆ ಮಾತ್ರ ದೇಶ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಗಿಲ್ಡ್ ಅಧ್ಯಕ್ಷ ವಿಜಯಕುಮಾರ್ ಜಾಗಟಗಲ್ ಮಾತನಾಡಿ, ವೃತ್ತಿಪರತೆ ಹೆಚ್ಚಿಸುವಲ್ಲಿ ಸಂಘಗಳ ಪಾತ್ರ ದೊಡ್ಡದಿದೆ. ಕೇಲವ ಭಾಷಣ, ಕಾರ್ಯಕ್ರಮಗಳಿಗೆ ಸೀಮಿತವಾಗದೆ ಪತ್ರಕರ್ತರ ಕ್ಷೇಮೆ, ವೃತ್ತಿಪರತೆ ಹೆಚ್ಚಿಸಲು ಪ್ರಯತ್ನಿಸಬೇಕಾಗಿದೆ ಎಂದರು.
ರಿಪೋರ್ಟರ್ಸ್ ಗಿಲ್ಡ್ ಕಳೆದ ೨೫ ವರ್ಷಗಳಿಂದ ತನ್ನದೆ ಘನತೆ, ಮೌಲ್ಯ ಇರಿಸಿಕೊಂಡು ನಗರದ ಪತ್ರಕರ್ತರ ಹಿತವಕಾಯುತ್ತಿದೆ. ಪತ್ರಕರ್ತರ ಕ್ಷೇಮಾಭಿವೃದ್ಧಿ ನಿದಿ ಸ್ಥಾಪಿಸಲಾಗಿದೆ, ಪಾಲಿಕೆಯಿಂದ ನಗರದ ಪತ್ರಕರ್ತರಿಗೆ ಆರೋಗ್ಯ ವಿಮೆಗಾಗಿ ಅನುದಾನ ಮಿಸಲಿರಿಸಲು ಪ್ರಯತ್ನಿಸಿದೆ. ವಿಮೆ ಮಾಡಿಸುತ್ತಿದೆ. ಉತ್ತಮ ಸೇವೆ ಸಲ್ಲಿಸಿದ ಪತ್ರಕರ್ತರ ಪ್ರೋತ್ಸಾಹದ ಜೊತೆಗೆ ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುತ್ತಿದೆ. ಗಿಲ್ಡ್ ಬೆಳೆದು ಬಂದ ಇತಿಹಾಸ ತಿಳಿಸಲು ವೆಬ್ ಸೈಟ್ ರೂಪಿಸಲಾಗಿದೆ ಎಂದರು.
ಇದೆ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಕೆ, ಅವರು ಗಿಲ್ಡ್ ನ ವೆಬ್ ಸೈಟ್ ಲೋಕಾರ್ಪಣೆ ಮಾಡಿದರು.
ಮಹಾನಗರ ಪಾಲಿಕೆ ಮಾಜಿ ಮಹಾಪೌರರು ನರಸಮ್ಮ ನರಸಿಂಹಲು ಮಾಡಿಗಿರಿ ಅವರು ಪತ್ರಿಕಾ ವಿತರಕರಿಗೆ ಚಳಿಕೋಟ್ ವಿತರಿಸಿದರು.
ಪ್ರಧಾನ ಕಾರ್ಯದರ್ಶಿ ವೆಂಕಟೇಶ ಹೂಗಾರ್ ಪ್ರಸ್ತಾವಿಕ ಮಾತನಾಡಿ, ರಾಯಚೂರು ರಿಪೋಟರ್ ಗಿಲ್ಡ್ ಬೆಳೆದು ಬಂದ ದಾರಿ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು.
ಇದೇ ವೇಳೆ ರಘುನಾಥರೆಡ್ಡಿ ಅವರಿಗೆ ೨೫ ಸಾವಿರ ನಗದು ರಿಪೋರ್ಟರ್ಸ್ ಗಿಲ್ಡ್ ನ ಜೀವಮಾನ ಸಾಧನೆ ಪ್ರಶಸ್ತಿ, ವಿವಿಧ ದತ್ತಿ ಪ್ರಶಸ್ತಿಗಳನ್ನು ಚಂದ್ರಕಾಂತ ಮಸಾನಿ, ಬಿ.ರಾಜು ಹಾಗೂ ಕೆ.ಶ್ರೀನಿವಾಸ್ ಅವರಿಗೆ ಪ್ರದಾನ ಮಾಡಲಾಯಿತು.
ವಿಜಯವಾಣಿ ಸ್ಥಾನಿಕ ಸಂಪಾದಕ ಜಗನ್ನಾಥ ಆರ್ ದೇಸಾಯಿ,
ಹೆಚ್ಚುವರಿ ಪೊಲೀಸ್ ಅಧಿಕಾರಿ ಎಂ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಡಿ.ಕೆ.ಕಿಶನರಾವ್, ಜಿಲ್ಲಾ ಪ್ರಾದೇಶಿಕ ದಿನಪತ್ರಿಕೆಗಳ ಸಂಘದ ಅಧ್ಯಕ್ಷ ಚನ್ನಬಸವ ಬಾಗಲವಾಡ, ಪ್ರ.ಕಾರ್ಯದರ್ಶಿ ಖಾನ್ ಸಾಬ್ ಸೇರಿದಂತೆ ಇತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

