
ರಾಯಚೂರು/ಶಿವಮೊಗ್ಗ ಜ.19: ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಅಂತರಜಿಲ್ಲಾ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಪತ್ರಕರ್ತರ ತಂಡ ದ್ವಿತೀಯ ಸ್ಥಾನ ಪಡೆದಿದೆ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿಯಲ್ಲಿ ರಾಯಚೂರು ತಂಡ ಉತ್ತಮ ಪ್ರದರ್ಶನ ನೀಡಿ ಎರಡನೇ ಬಹುಮಾನ ಪಡೆದಿದೆ.
ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಹಾಗೂ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ತಂಡ ಫೈನಲ್‌ಗೆ ತಲುಪಿದ್ದವು. ಅಂತಿಮ ಹಣಾಹಣಿಯಲ್ಲಿ ಶಿವಮೊಗ್ಗ ಪ್ರೆಸ್ ಟ್ರಸ್ಟ್ ತಂಡ ಗೆದ್ದು ಪ್ರಥಮ ಬಹುಮಾನ ಪಡೆಯಿತು. ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ತಂಡ ಎರಡನೇ ಸ್ಥಾನ, ದಾವಣಗೆರೆ ಪತ್ರಕರ್ತರ ತಂಡ ಮೂರನೇ ಸ್ಥಾನ ಪಡೆಯಿತು. ಪ್ರಥಮ ಸ್ಥಾನಕ್ಕೆ ಟ್ರೋಫಿ ಜೊತೆ 25 ಸಾವಿರ ರೂಪಾಯಿ ಚೆಕ್ , ದ್ವಿತೀಯ ಸ್ಥಾನಕ್ಕೆ ಟ್ರೋಫಿ ಜೊತೆ 15 ಸಾವಿರ ರೂಪಾಯಿ ಚೆಕ್, ತೃತೀಯ ಸ್ಥಾನಕ್ಕೆ ಟ್ರೋಫಿ ಜೊತೆ 10 ಸಾವಿರ ರೂಪಾಯಿ ಚೆಕ್ ಬಹುಮಾನವಾಗಿ ನೀಡಲಾಯಿತು.
ರಾಯಚೂರು ತಂಡದ ಆಟಗಾರ ಭೀಮೇಶ್ ಪೂಜಾರ್ ಸೇರಿ ಮೂವರು ಪಂದ್ಯ ಪುರುಷೋತ್ತಮ ಪ್ರಶಸ್ತಿ ಪಡೆದರು. ಶ್ರೀಕಾಂತ್ ಸಾವೂರ್ ನಾಯಕತ್ವದ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ತಂಡ ದ್ವಿತೀಯ ಸ್ಥಾನ ಪಡೆದು ಸಂಭ್ರಮಿಸಿತು.
ಇದಕ್ಕೂ ಮುನ್ನ ಬೆಳಿಗ್ಗೆ ಸಹ್ಯಾದ್ರಿ ಕಾಲೇಜು ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಾವಳಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಚಾಲನೆ ನೀಡಿದರು. ಈ ವೇಳೆ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ, ಶಿವಮೊಗ್ಗ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ವೈದ್ಯನಾಥ್ , ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಶಿವಮೊಗ್ಗ ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಸೇರಿ ಹಲವರು ಭಾಗವಹಿಸಿದ್ದರು.
ರಾಜ್ಯಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾವಳಿಯಲ್ಲಿ ದ್ವಿತೀಯ ಸ್ಥಾನ ಪಡೆದ ರಾಯಚೂರು ಕ್ರಿಕೆಟ್ ತಂಡಕ್ಕೆ ರಾಯಚೂರು ರಿಪೋರ್ಟರ‌್ಸ್ ಗಿಲ್ಡ್ ಅಧ್ಯಕ್ಷ ವಿಜಯ್ ಜಾಗಟಗಲ್, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ಹೂಗಾರ್, ಉಪಾಧ್ಯಕ್ಷ ಜಯರಾಮ ಎಂ, ಹಿರಿಯ ಪತ್ರಕರ್ತರಾದ ಕೆ.ಸತ್ಯನಾರಾಯಣ, ಚನ್ನಬಸವಣ್ಣ, ಚನ್ನಬಸವ ಬಾಗಲವಾಡ ,ಖಾನ್ ಸಾಬ್ ಮೋಮಿನ್ ಸೇರಿ ಹಲವರು ಅಭಿನಂದನೆ ಸಲ್ಲಿಸಿದ್ದಾರೆ.
